ಅತಿಸವಲತ್ತು ಪಡೆದ ರಾಷ್ಟ್ರ ವ್ಯವಹಾರ

ದೇಶಗಳ ನಡುವಣ ವ್ಯಾಪಾರಕ್ಕೆ ಆರ್ಥಿಕ ವ್ಯವಹಾರಗಳಿಗೆ ಇರಬಹುದಾದ ಪ್ರತಿಬಂಧಕಗಳನ್ನು ನಿವಾರಿಸಿ ಅಂತರ್ದೇಶೀಯ ವ್ಯಾಪಾರ ಸುಗಮವಾಗಿ, ವಿಪುಲವಾಗಿ ನಡೆಯುವಂತೆ ಮಾಡುವುದೇ ಇದರ ಗುರಿ. ಅತಿ ಸವಲತ್ತು ಪಡೆದ ರಾಷ್ಟ್ರಕ್ಕೆ ತೋರಿಸುವ ಎಲ್ಲ ರಿಯಾಯಿತಿಗಳನ್ನು ವ್ಯವಹರಿಸುವ ಇತರ ಎಲ್ಲ ರಾಷ್ಟ್ರಗಳಿಗೂ ತೋರಿಸಬೇಕೆಂಬುದು ಈ ವ್ಯವಹಾರದ ಅರ್ಥ. ಇದರಿಂದ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಒಂದು ಬಗೆಯ ಸಮಾನತೆ ಏರ್ಪಡುತ್ತದೆ. ಹದಿನೇಳನೆಯ ಶತಮಾನದಲ್ಲಾಗಲೇ ಇಂಥ ಕರಾರುಗಳನ್ನು ವಾಣಿಜ್ಯ ವ್ಯಾಪಾರ ಕಾನೂನುಗಳಲ್ಲಿ ಸೇರಿಸುವ ಕೆಲಸ ನಡೆದಿತ್ತು. ಈ ವ್ಯವಹಾರದ ಸೂಕ್ಷ್ಮ ವಿವರ ಹೀಗಿದೆ:
	
ಒಪ್ಪಂದವನ್ನು ಮಾಡಿಕೊಂಡು ವ್ಯಾಪಾರ ನಡೆಸಬಯಸುವ ಎರಡು ರಾಷ್ಟ್ರಗಳು, ಮುಂದೆ ತಾವು ಮೂರನೆಯ ರಾಷ್ಟ್ರಕ್ಕೆ ನೀಡಬಹುದಾದ ರಿಯಾಯಿತಿಗಳನ್ನು ಪರಸ್ಪರ ನೀಡಬೇಕು. ಇವು ಮುಖ್ಯವಾಗಿ ಸುಂಕದ ತೆರಿಗೆಗೆ ಸಂಬಂಧಿಸಿದುವು. ಜೊತೆಗೆ ಇತರ ರಿಯಾಯಿತಿಗಳೂ ಇರಬಹುದು. ಉದಾಹರಣೆಗೆ, ಭಾರತ ಮತ್ತು ಈಜಿಪ್ಟ್‍ಗಳ ನಡುವಣ 1953ರ ವಾಣಿಜ್ಯ ಒಪ್ಪಂದ ಕಾಯಿದೆಯ 1ನೆಯ ಮತ್ತು 11ನೆಯ ಕಟ್ಟಳೆಗಳನ್ನು ನೋಡಬಹುದು. 
	
ಒಂದು ರಾಷ್ಟ್ರ ಇತರ ಅನೇಕ ರಾಷ್ಟ್ರಗಳೊಡನೆ ಅತಿ ಸವಲತ್ತು ಪಡೆದ ರಾಷ್ಟ್ರ ವ್ಯವಹಾರಗಳನ್ನು ಹೊಂದಿದ್ದು, ಯಾವುದೇ ವಿಶೇಷ ಸುಂಕ ರಿಯಾಯಿತಿ ತೋರಿಸಿದ್ದರೆ, ಆ ರಿಯಾಯಿತಿ ಇತರ ಎಲ್ಲಾ ರಾಷ್ಟ್ರಗಳಿಗೂ ಏಕಕಾಲದಲ್ಲಿ ಅನ್ವಯವಾಗುತ್ತದೆ. ಆದರೆ ಯಾವ ರಾಷ್ಟ್ರವಾದರೂ ಅತಿಸವಲತ್ತು ಪಡೆದ ರಾಷ್ಟ್ರ ಸಂಬಂಧದಲ್ಲಿ ತನಗಿರುವ ರಿಯಾಯಿತಿಯ ಹಕ್ಕನ್ನು ಚಲಾಯಿಸದೆ ಇರುವ ಅವಕಾಶ ಅದಕ್ಕೆ ಸೇರಿದ್ದು.
	
ಅತಿಸವಲತ್ತು ಪಡೆದ ರಾಷ್ಟ್ರ ಒಪ್ಪಂದ ಜಿ.ಎ.ಟಿ.ಟಿ.ಯ ಮೂಲ ವೈಶಿಷ್ಟ್ಯಗಳಲ್ಲೊಂದು (ಜನರಲ್ ಅಗ್ರಿಮೆಂಟ್ ಆನ್ ಟಾರೀಫ್‍ಸ್ ಅಂಡ್ ಟ್ರೇಡ್). ಇದರ 1ನೆಯ ಕಟ್ಟಳೆಯಲ್ಲಿರುವಂತೆ ಕರಾರುಮಾಡಿಕೊಳ್ಳುವ ಪಕ್ಷಗಳು ಮಾತ್ರ ಅತಿಸವಲತ್ತು ಪಡೆದ ರಾಷ್ಟ್ರ ಒಪ್ಪಂದದ ಅನುಕೂಲಗಳನ್ನು ಅನುಭವಿಸುವುವು. ಇದರ ಪರಿಣಾಮವಾಗಿ ಎರಡು ಪಕ್ಷಗಳು ಒಂದೇ ಕಾಲದಲ್ಲಿ ತಮ್ಮತಮ್ಮೊಳಗೆ ಸಮಾಲೋಚನೆ ನಡೆಸಿಕೊಂಡಿದ್ದರೂ ಜಿ.ಎ.ಟಿ.ಟಿ.ಯ ಸುಂಕ ಸಮಾವೇಶಗಳಲ್ಲಿ ಸಮಾಲೋಚಿಸಲ್ಪಟ್ಟ ಸುಂಕ ರಿಯಾಯಿತಿಗಳು ಅದರ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ದೊರೆಯುತ್ತವೆ.
	
ಪ್ರಪಂಚದ ವಾಣಿಜ್ಯವನ್ನು ಅಭಿವೃದ್ಧಿಪಡಿಸುವ ಬದಲು ಅದರ ವಿಸ್ತರಣೆಯನ್ನು ಕುಂಠಿತಮಾಡುವ ವಿಷಯವೂ ಅತಿಸವಲತ್ತು ಪಡೆದ ರಾಷ್ಟ್ರ ಷರತ್ತಿನಲ್ಲಿ ಇದೆ. ಕೆಲವು ರಾಷ್ಟ್ರಗಳು ಎಲ್ಲಿ ತಮ್ಮ ರಿಯಾಯಿತಿಗಳನ್ನು ಯಾವ ಒಂದು ಉಪಯೋಗವೂ ಇಲ್ಲದೆ ಇತರ ರಾಷ್ಟ್ರಗಳಿಗೆ ನೀಡಬೇಕಾಗುತ್ತದೊ ಎಂಬ ಹೆದರಿಕೆಯಿಂದ ಈ ಸುಂಕ ರಿಯಾಯಿತಿ ಸಮಾಲೋಚನೆಯ ಗೊಡವೆಗೆ ಹೋಗುವುದೇ ಇಲ್ಲ. ರಾಷ್ಟ್ರಗಳ ಒಕ್ಕೂಟ ಈ ಅತಿಸವಲತ್ತು ಪಡೆದ ರಾಷ್ಟ್ರ ವಿಷಯದ ವ್ಯಾಪ್ತಿ ಸುಂಕ ರಿಯಾಯಿತಿಗೂ ಹರಡುವುದಕ್ಕೆ ಅನೇಕ ರಾಷ್ಟ್ರಗಳ ವಿರೋಧವಿದೆ ಎಂಬುದನ್ನು 1927 ರಿಂದ 1931ರ ಅವಧಿಯಲ್ಲಿ ಕಂಡುಕೊಂಡಿತು. ಈಚೆಗೆ ವಿಶ್ವಸಂಸ್ಥೆ ಕೂಡ ಈ ವ್ಯವಹಾರದ ಉಪಯುಕ್ತಾಂಶಗಳನ್ನು ಉಳಿಸಿಕೊಳ್ಳಲು ಶ್ರಮಿಸಿದೆ. 						
 
(ಎಚ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ